"ಖ್ಯಾತ ಕತೆಗಾರ ಯಶವಂತ ಚಿತ್ತಾಲರ ಮೊದಲ ಕಾದಂಬರಿ 'ಮೂರು ದಾರಿಗಳು'. ಈ ಕಾದಂಬರಿಯು ಮುಖ್ಯವಾಗಿ ಒಂದು ಪ್ರದೇಶದ ಅನುಭವವನ್ನು ಕಟ್ಟಿಕೊಡುತ್ತದೆ. ಹೀಗಾಗಿ ಇದನ್ನು ಪ್ರಾದೇಶಿಕ ಕಾದಂಬರಿ ಎಂದು ಕರೆಯಲಡ್ಡಿಯಿಲ್ಲ. ಉತ್ತರ ಕನ್ನಡ ಜಿಲ್ಲೆಯ ಕರಾವಳಿಯ ಜನಜೀವನವನ್ನು ಚಿತ್ರಿಸುವ ಪ್ರಥಮ ಕಾದಂಬರಿ. ಈ ಮೊದಲು ವಿ.ಜಿ. ಭಟ್ಟ, ವಿ.ಜಿ. ಶಾನಭಾಗ ಹಾಗೂ ಯಶವಂತರ ಕತೆಗಳಲ್ಲಿ ಉತ್ತರ ಕನ್ನಡದ ಜೀವನ ದಾಖಲಾಗಿದೆ. ಆದರೆ, ಮೂರುದಾರಿಗಳು ಕಾದಂಬರಿಯಲ್ಲಿ ಅದು ಕಾದಂಬರಿಯಂತಹ ವಿಸ್ತೃತ ಸಾಹಿತ್ಯ ಪ್ರಕಾರ ಸೇರಿದ್ದು ಬಹುಶಃ ಇದೇ ಮೊದಲು.
'ಮೂರು ದಾರಿಗಳು' ಕಾದಂಬರಿಯಲ್ಲಿಯ ಪ್ರಾದೇಶಿಕತೆಯ ವೈಶಿಷ್ಟವು ಕೇವಲ ಹಿನ್ನೆಲೆಯಾಗಿ ಮಾತ್ರ ಬರುವುದಿಲ್ಲ. ಅದು ಕತೆಯ ಭಾಗವಾಗಿಯೇ ಬರುತ್ತದೆ. ಈ ಕಾದಂಬರಿಯ ಬಹುತೇಕ ಪಾತ್ರಗಳು ಕರಾವಳಿ ಪ್ರದೇಶದ ಅಲ್ಲಿಯ ಸಮಾಜಕ್ಕೆ ನಿಕಟವಾಗಿ ಸಂಬಂಧಿಸಿದವುಗಳು. ಜೀವನದೊಡಲಿನಿಂದ ಅವರ ವ್ಯಕ್ತಿತ್ವ ರೂಪುಗೊಂಡಿದೆ. ಹಾಗೂ ಆ ಕಕ್ಷೆಯಲ್ಲಿಯೇ ಅವರ ವೈಯಕ್ತಿಕ ಜೀವನ ನಡೆಯುತ್ತದೆ."
"ಚಿತ್ತಾಲರ ಕೊನೆಯ ಕತೆಗಳ ಸಂಕಲನ 'ಕೋಳಿ ಕೂಗುವ ಮುನ್ನ'. ಈ ಸಂಕಲನದ ಬೆನ್ನುಡಿಯಲ್ಲಿ ವಿಮರ್ಶಕ ಜಿ.ಎಸ್. ಆಮೂರ ಅವರು 'ಸಣ್ಣ ಕಥೆಯ ಕ್ಷೇತ್ರದಲ್ಲಿ ಯಶವಂತರು ದೊರಕಿಸಿದ ಯಶಸ್ಸು ಶ್ರೇಷ್ಠ ಮಟ್ಟದ್ದು ಎನ್ನುವುದರಲ್ಲಿ ಸಂಶಯವಿರಲಾರದು. ಅವರ ಈ ಸಾಧನೆಗೆ ಮುಖ್ಯವಾಗಿ ಎರಡು ಕಾರಣಗಳಿವೆ. ಒಂದು ಅವರ ಗತಿಶೀಲ ಸಂವೇದನೆ, ಅವರ ಸಾಹಿತ್ಯಕ್ಕೆ ಸಣ್ಣ ಹಾಗೂ ಸಾಂಗತ್ಯಗಳನ್ನು ತಂದುಕೊಡುವ ಮೂಲಭೂತ ಆಸ್ಥೆ, ಅನುಭವ ಅವರಲ್ಲಿವೆ. ತಮ್ಮದೇ ಆದ ಪ್ರಬುದ್ಧ ಜೀವನದೃಷ್ಟಿಯೂ ಅವರಿಗಿದೆ. ಇದರ ಜೊತೆಗೆ ಪರಿಸರದ ಸ್ಥಿತ್ಯಂತರಗಳಿಗೆ ಸೃಜನಶೀಲವಾಗಿ ಪ್ರತಿಕ್ರಿಯಿಸಬಲ್ಲ ಚೈತನ್ಯಶೀಲತೆಯನ್ನು ಅವರು ಹೊಂದಿದ್ದಾರೆ. ಎರಡನೆಯದಾಗಿ, ತಮ್ಮ ವಿಶಿಷ್ಟ ದರ್ಶನದ ವಿವಿಧ ಮುಖಗಳನ್ನು ಸಾಕಾರಗೊಳಿಸಬಲ್ಲ ಕಲೆ, ಈ ಕಲೆಯನ್ನು ಸಾಧಿಸುವುದಕ್ಕೆ ಅವಶ್ಯವಾದ ಪರಿಶ್ರಮ, ಪೂರ್ವಚಿಂತನ, ಪ್ರಯೋಗಶೀಲತೆ, ಭಾಷಾ ಸಂಪತ್ತೂ ಅವರಲ್ಲಿವೆ' ಎಂದು ವಿವರಿಸಿದ್ದಾರೆ."
"ಯಶವಂತ ಚಿತ್ತಾಲರ ಬೃಹತ್ ಕಾದಂಬರಿ 'ಪುರುಷೋತ್ತಮ'. ಭಾರತೀಯ ಭಾಷಾ ಪರಿಷತ್ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳನ್ನು ಗಳಿಸಿರುವ ಮಹತ್ವದ ಕಾದಂಬರಿ.
ಯಶವಂತ ಚಿತ್ತಾಲರ ಈ ಬೃಹತ್ ಕೃತಿ ಕನ್ನಡ ಕಾದಂಬರಿಯ ಇತಿಹಾಸದಲ್ಲಿ ಒಂದು ಮಹತ್ವದ ಮೈಲಿಗಲ್ಲು. ಇಂದು, ಜೀವನ ಹಾಗೂ ಸಾಹಿತ್ಯಗಳೆರಡನೂ ದಿಕ್ಕು ತಪ್ಪಿಸುತ್ತಿರುವ ನಿಷ್ಟುರ ಸಮಸ್ಯೆಗಳನ್ನು ಕುರಿತ ಸೃಜನಶೀಲ ಧ್ಯಾನದ ಫಲವಾದ 'ಪುರುಷೋತ್ತಮ', ಕಾದಂಬರಿ ಪ್ರಕಾರದ ಕ್ಲಿತಿಜಗಳನ್ನು ವಿಸ್ತರಿಸುವ ಚೇತೋಹಾರಿ ಪ್ರಯತ್ನವಾಗಿದೆ.
ಈ ಮಹಾ ಕಾದಂಬರಿಯು ಸ್ಕೂಲವಾಗಿ ಎರಡು ಕಥಾವಸ್ತುಗಳನ್ನು ಒಳಗೊಂಡಿದೆ. ಹನೇಹಳ್ಳಿಯ ಕುಟುಂಬವೊಂದರ ದಾಯಾದಿ ಮತ್ಸರ ಹಾಗೂ ಷಡ್ಯಂತ್ರಗಳ ಕಾರಣದಿಂದುಂಟಾಗುವ ಅಪಾರ ಹಿಂಸೆ ಮತ್ತು ಜೀವಹಾನಿ. ನಾಲ್ಕು ತಲೆಮಾರು ಹಾಗೂ ಮುಕ್ಕಾಲು ಶತಮಾನ ಕಾಲದ ಘಟನೆಗಳಿರುವ ಮೊದಲ ಭಾಗದಲ್ಲಿ ಹನೇಹಳ್ಳಿಯ ಕೌಟುಂಬಿಕ ಕಲಹ ಮುಖ್ಯ. ಎರಡನೆಯ ಭಾಗದಲ್ಲಿ ಮುಂಬಯಿಯ ಮನೆ ಪ್ರಾಮುಖ್ಯತೆ ಪಡೆಯುತ್ತದೆ."
"ವರ್ತಮಾನದ ಸಾಹಿತ್ಯಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾಳಜಿಗೆ ಸ್ಪಂದಿಸುವ ಕಾದಂಬರಿ 'ಶಿಕಾರಿ'. ಚಿತ್ತಾಲರ ಈ ಕಾದಂಬರಿಯ ಬೀಸು ದೊಡ್ಡದು. 'ಶಿಕಾರಿ'ಯು ಒಂದಕ್ಕಿಂತ ಹೆಚ್ಚು ಸಂವೇದನಾ ಕೇಂದ್ರಗಳಿರುವ ಕಾದಂಬರಿ. ಮನುಷ್ಯನಲ್ಲಿ ಕಾಣಿಸುವ ಮತ್ತೊಬ್ಬನನ್ನು ಸಹಿಸಿಕೊಳ್ಳದಂತಹ ಅಹಂ, ಭಯ, ಆತಂಕಗಳನ್ನು ಕಾದಂಬರಿಯು ಚಿತ್ರಿಸುತ್ತದೆ. ಸಮಾಜದಲ್ಲಿ ಮನೆ ಮಾಡಿರುವ ಜಾತಿವ್ಯವಸ್ಥೆ, ಅನಿವಾರ್ಯ ಸಂಬಂಧಗಳು, ಮನುಷ್ಯನ ಜ್ಞಾನದ ಫಲವಾದ ಸಾಧನೆಗಳನ್ನು ಸ್ವಾರ್ಥಕ್ಕೆ, ರಾಜಕಾರಣಕ್ಕೆ ಬಳಸಿಕೊಳ್ಳುವುದು, ಎದುರಾಳಿಯ ಮುರಿಯಲು-ಹಣಿಯಲು ಬಳಸುವುದು - ಹೀಗೆ ಹಲವು ಸಂಗತಿಗಳನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿದೆ. ಕಾದಂಬರಿಯುದ್ದಕ್ಕೂ ಘಟನೆ, ಪ್ರತಿಭಟನೆ, ಅದಕ್ಕೊಂದು ಕಥೆ, ಧ್ವನಿ, ಸಂವೇದನೆಯಾಗಿ ಮೂಡಿ ಬಂದಿದೆ.
ಹಿರಿಯ ಲೇಖಕ-ಪತ್ರಕರ್ತ ಜಿ.ಎನ್. ರಂಗನಾಥರಾವ್ ಅವರು 'ಶಿಕಾರಿ' ಕುರಿತು 'ಕಾದಂಬರಿಗೆ ಸಹಜವೆನಿಸುವ ವಿಸ್ತಾರ, ಘಟನಾಬದ್ಧವಾದ ಕಥೆಯ ಭದ್ರ ಅಸ್ತಿಭಾರ, ನಾಯಕನ ಜ್ವಲಿಸುವ ಪ್ರಜ್ಞೆಯ ಹಿಲಾಲಿನ ಬೆಳಕಿನಲ್ಲಿ ಗೋಚರಿಸುವ, ಸಾಮಾಜಿಕವಾಗಿ ಬಾಧಿಸುವಂಥ ವಿದ್ಯಮಾನಗಳು ಇವುಗಳಿಂದಾಗಿ ಕಾದಂಬರಿ ವಾಚ್ಯಾರ್ಥ ದಾಟಿ ಪಡೆದುಕೊಳ್ಳುವ ಅರ್ಥಾಂತರ ಮೊದಲಾದ ಕಾರಣಗಳಿಂದ ಶಿಕಾರಿ ಮಾನವಶಾಸ್ತ್ರ, ಸಮಾಜಶಾಸ್ತ್ರ, ಮನಶ್ಯಾಸ್ತ್ರ ಇತ್ಯಾದಿ ಹಲವು ನಿಟ್ಟಿನ ಅಧ್ಯಯನಕ್ಕೆ ಮೌಲ್ಯ ನಿಷ್ಕರ್ಷೆಗೆ ಅರ್ಹವಾದ ಕೃತಿಯಾಗಿದೆ' ಎಂದು ವಿಶ್ಲೇಷಿಸಿದ್ದಾರೆ."