"ಖ್ಯಾತ ಕಥೆಗಾರ ವಿವೇಕ ಶಾನಭಾಗ ಅವರ ಕಾದಂಬರಿ-ಸಕೀನಾಳ ಮುತ್ತು. ಲೇಖಕರು ಹೇಳುವಂತೆ 'ಏನೋ ಒಂದು ನಡೆದು ಅದಕ್ಕೆ ಕುಣಿಕೆ ಹಾಕಿ ಮತ್ತೇನೇನೋ ನಡೆಯುತ್ತ ಸಾಗುತ್ತದೆ. ಆದರೆ, ಕಾದಂಬರಿ ಇರುವುದು ನಡೆದಿದ್ದರ ಬಗ್ಗೆಯೋ ಅಥವಾ ನಡೆಯಿತೆಂದು ಗ್ರಹಿಸಲಾಗಿದ್ದರ ಬಗ್ಗೆಯೋ ಅಥವಾ ನಡೆಯಬಹುದಾದ ಸಾಧ್ಯತೆಗಳ ಬಗ್ಗೆಯೋ-ಇಂಥ ಪ್ರಶ್ನೆಗಳು ಈ ಕಾದಂಬರಿಯಲ್ಲಿ ಓದುಗನೆಂಬ ವಿಕ್ರಮನನ್ನು ಬೇತಾಳಗಳಾಗಿ ಕಾಡುತ್ತವೆ. ಹಾಗೆ ಕಥೆ ಕಾಣುವ ಮೂಲಕ ಓದುಗರಿಗೆ -ಸ್ವತಃ ಲೋಕವೇ ಹಾಗಿರಬಹುದೆ, ಸ್ಥಿರವೂ, ನಿಶ್ಚಿತವೂ ಎಂದು ತಿಳಿದ ಈ ಜೀವನ ವ್ಯಾಪಾರಗಳು ಕೇವಲ ಮನೋನಿರ್ಮಿತಗಳೆ? ಎಂಬೊಂದು ಗುಮಾನಿ ಉದ್ಭವಿಸಿದರೆ ಅದು ಕಾಕತಾಳೀಯವಾಗಿರಲಾರದೇನೋ...' ಎಂದು ಅಭಿಪ್ರಾಯಪಟ್ಟಿದ್ದಾರೆ. ಕಥಾ ವಸ್ತು, ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ, ಸನ್ನಿವೇಶಗಳ ಜೋಡಣೆ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಈ ಕಾದಂಬರಿಯು ಓದುಗರ ಗಮನ ಸೆಳೆಯುತ್ತದೆ."
"'ಬಹುಮುಖಿ' ವಿವೇಕ ಶಾನಭಾಗ ಅವರ ನಾಟಕಕೃತಿ. ಅಕ್ಷರ ಪ್ರಕಾಶನದಿಂದ 2008ರಲ್ಲಿ ಪ್ರಕಟಗೊಂಡ ಈ ಕೃತಿ 2020ರಲ್ಲಿ ಮತ್ತೆ ಮರುಮುದ್ರಣಗೊಂಡಿದೆ. ಇದು ಈವತ್ತಿನ ಕಾಲದಲ್ಲಿ ಜರುಗುವ ನಾಟಕ. ರೋಚಕ ಕಥೆಯೊಂದರ ಬೆನ್ನಟ್ಟಿ ಹೋದ ಪತ್ರಕರ್ತನೊಬ್ಬನಿಗೆ ಎದುರಾಗುವ ಜಗತ್ತು ಇಲ್ಲಿ ಹಲವು ಪಾತಳಿಗಳಲ್ಲಿ ಬಿಚ್ಚಿಕೊಳ್ಳುತ್ತ ಹೋಗುತ್ತದೆ. ಅವನು ಸೃಷ್ಟಿಸಿದ ಸುದ್ದಿಯ ಮುಖಾಂತರ ಅವರ ಜೀವನದೊಳಕ್ಕೆ ತರುತ್ತಾರೆ ಮತ್ತು ಆ ಮೂಲಕ ಪಲ್ಲಟದ ನೋವು, ಶಹರದ ಬದುಕಿನ ಢಾಂಬಿಕತೆ, ಪೊಳ್ಳು ಸಂಬಂಧಗಳ ಅಸಹನೀಯತೆ, ನಗರವೆಂಬ ಬೆಂಕಿಯೊಳಗೆ ಧಾವಿಸಿ ಬಿದ್ದು ಉರಿದು ಹೋಗುತ್ತಿರುವ ಜೀವನಕ್ರಮಗಳು ಅನಾವರಣಗೊಳ್ಳುತ್ತವೆ.
ನಮ್ಮ ದಿನನಿತ್ಯಗಳನ್ನು ಅನೇಕ ವಿಧಗಳಲ್ಲಿ ಪ್ರಭಾವಿಸುತ್ತಿರುವ ಮಾಧ್ಯಮಗಳು, ಅವು ಹುಟ್ಟಿಸಿದ ಭ್ರಮಾಲೋಕದಲ್ಲಿ ತಾಳತಪ್ಪಿದ ಸಂಬಂಧಗಳು, ಇತಿಹಾಸ-ಕಥನ-ನೆನಪುಗಳನ್ನು ಕುಶಲ ಕುತಂತ್ರದಿಂದ ಬಳಸುವ ಜನರು ನಾಟಕದುದ್ದಕ್ಕೂ ಹಲವು ವೇಶಗಳಲ್ಲಿ ಬರುತ್ತಾರೆ. ಯಾವುದು ಕಥನ, ಯಾವುದು ಇತಿಹಾಸ, ಯಾವುದು ವೈಯಕ್ತಿಕ ದುರಂತ, ಯಾವುದು ಜೀವನೋಪಾಯದ ಕಾಯಕ ಅನ್ನುವುದು ಸ್ಪಷ್ಟವಾಗದ, ಯಾರು ಯಾರನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆಂದು ತಿಳಿಯದ ವಿಶ್ವದೊಳಗೆ ಈ ನಾಟಕವಿದೆ."
"ಈ ಕಥನವು ಘಟಿಸುವುದು ಉತ್ತರ ಕನ್ನಡ ಜಿಲ್ಲೆಯಲ್ಲಿ. ಕರಾವಳಿಯ ಈ ಜಿಲ್ಲೆಯಲ್ಲಿ ಹಲವು ನದಿಗಳು ಹರಿದು ಸಮುದ್ರ ಸೇರುತ್ತವೆ. ನದಿಯು ಸಮುದ್ರವನ್ನು ಸೇರುವ ತಾಣವು ದೂರದಿಂದ ಶಾಂತ ಮನೋಹರವಾಗಿ ತೋರಿದರೂ, ಆ ಅಳಿವೆಯ ನಡುವೆ ಹೋಗಿ ನೋಡಿದಾಗಲೇ ನದಿಯು ಸಾಗರವನ್ನು ಸೇರುವಾಗಿನ ಕೋಲಾಹಲ ಕಾಣುವುದು. ಅಂತೆಯೇ ಬದಲಾವಣೆಯೊಡನೆ ಸೆಣಸುತ್ತಿರುವ ಇಲ್ಲಿಯ ಜೀವನವೂ."
"ಇನ್ನೂ ಒಂದು ಕಾದಂಬರಿಯ ವೈಶಿಷ್ಟ್ಯ ಹಲವು ರೀತಿಯದು. ಹೊಸ ಕಥಾ ವಸ್ತು, ಹೊಸ ಕಥನವಿಧಾನ, ಲೇಖಕರ ವಿಶ್ಲೇಷಣಾ ಸಾಮರ್ಥ್ಯ - ಎಲ್ಲವೂ ಇದನ್ನೊಂದು ಮುಂಚೂಣಿಯ ಕೃತಿಯನ್ನಾಗಿ ಮಾಡಿವೆ. ಪ್ರತಿಯೊಂದು ಪ್ರಬುದ್ಧ ಕೃತಿಯೂ ತನ್ನ ಶೈಲಿಯನ್ನು ವಸ್ತುವಿನ ಜತೆ ಸಮನ್ವಯಗೊಳಿಸುವುದರ ಮೂಲಕ ಕಲಾತ್ಮಕವಾಗುತ್ತದೆ. ಇದನ್ನೇ ಸಾಮಾನ್ಯವಾದ ಭಾಷೆಯಲ್ಲಿ ಕಥನಕಲೆಯೆಂದು ಹೇಳುವುದು. ವಿವೇಕ ಶಾನಭಾಗರಿಗೆ ಇದು ಆರಂಭದ ಕಾದಂಬರಿಯಲ್ಲೇ ಸಿದ್ಧಿಸಿರುವುದು ಮಹತ್ವದ ಸಂಗತಿ. ಅವರು ಸೂಕ್ಷ್ಮಾತಿಸೂಕ್ಷ್ಮ ವಿವರಗಳನ್ನು ಮತ್ತು ವಿಚಾರಗಳನ್ನು ತಮ್ಮ ಕಥನಕ್ಕೆ ಒಳಪಡಿಸುವ ಬಗೆ ಅನನ್ಯವಾದುದೇ ಸರಿ. - ಕೆ.ವಿ. ತಿರುಮಲೇಶ್"